ಶಿಕ್ಷಕರ ವರ್ಗಾವಣೆಯ ಸಮಯ ಹತ್ತಿರವಾಗಿದೆ. ಶಿಕ್ಷಣ ಇಲಾಖೆಯು ಶಿಕ್ಷಕರ ವರ್ಗಾವಣೆ ನಿಯಮವನ್ನು ಅಂತಿಮಗೊಳಿಸಿ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಸರಕಾರ, ಕರಡು ಪ್ರತಿಯನ್ನು ರೂಪಿಸಿ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿತ್ತು. ಸಾವಿರಕ್ಕೂ ಹೆಚ್ಚಿನ ಆಕ್ಷೇಪಣೆಗಳು ಬಂದಿದ್ದು, ಪರಿಶೀಲಿಸಿ, ಅಂತಿಮ ನಿಯಮ ರೂಪಿಸಿ ಅಧಿಕೃತ ಆದೇಶ ಶುಕ್ರವಾರ ದೊರಕಿದೆ.
ವರ್ಗಾವಣೆ ನಿಯಮ ಪ್ರಶ್ನಿಸಿ ಶಿಕ್ಷಕರು ಕೋರ್ಟ್ ಮೆಟ್ಟಿಲೇರಿದರೂ, ಕೋರ್ಟ್ ಶಿಕ್ಷಣ ಇಲಾಖೆಯ ನಿಲುವು ಪಡೆದುಕೊಂಡ ಮೇಲೆ ಮುಂದಿನ ಆದೇಶ ಹೊರಡಿಸಬೇಕಾಗುತ್ತದೆ.
ನಿಯಮದಲ್ಲಿ ಏನಿದೆ?
ವರ್ಗಾವಣೆ ವೇಳಾಪಟ್ಟಿಗೆ ಅನುಸಾರ ಮೊದಲು ವಿಶೇಷ ಕೌನ್ಸಿಲಿಂಗ್ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸುವುದು.
ಕಳೆದ ಬಾರಿ ಕಡ್ಡಾಯ, ವಲಯ, ಸಮರ್ಪಕ ವರ್ಗಾವಣೆಗಳಲ್ಲಿ ಅವಕಾಶ ಸಿಗದ ಬಾಧಿತ ಶಿಕ್ಷಕರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದು.
ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಿ ವಿಶೇಷ ಕೌನ್ಸಿಲಿಂಗ್ ಅವಕಾಶ ಪಡೆಯಲು ಅನುವಾಗುವಂತೆ ಅನುಕೂಲ ಮಾಡಿಕೊಡುವುದು.
ಜ್ಯೇಷ್ಠತಾ ಕ್ರಮಾಂಕ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿ ಅಂತಿಮಗೊಳಿಸುವುದು.
ಎಲ್ಲ ಬಾಧಿತ ಶಿಕ್ಷಕರಿಗೆ ಕೌನ್ಸಿಲಿಂಗ್ ಮಾಡುವುದು.
ಹೆಚ್ಚುವರಿ ಗೊಂಡಿರುವ ಪ್ರಕರಣಗಳಲ್ಲಿ ವಲಯ ನಿರ್ಬಂಧ ಇರುವುದಿಲ್ಲ.