ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನೆನೆಗುದ್ದಿಗೆ ಬಿದ್ದಿದ್ದ 2020ನೇ ಸಾಲಿನ ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಸಂಬಂಧಪಟ್ಟಂತೆ ಇದೀಗ ಗುಡ್‌ನ್ಯೂಸ್‌ವೊಂದು ಬಂದಿದೆ. ಹೌದು, 2020ನೇ ಸಾಲಿನ ಚಾಲಕ ಕಂ ನಿರ್ವಾಹಕ ಹುದ್ದೆಗೆ ಸಂಬಂಧ ಪಟ್ಟಂತೆ ಸರಕಾರ ನೀಡಿರುವ ಆದೇಶದ ಪ್ರಕಾರ 2000 ಹುದ್ದೆಗಳಿಗೆ ಸೀಮಿತಗೊಳಿಸಿ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಮೀಸಲಾತಿ ನಿಯಮಗಳ ಅನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ.
ದಿನಾಂಕ 03-03-2024 ರಿಂದ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ksrtc.karnataka.gov.in ನಲ್ಲಿ ಕರೆಪತ್ರವನ್ನು ಡೌನ್‌ಲೋಡ್ ಮಾಡಿ, ನಿಗಿದಿತ ದಿನಾಂಕದಂದು ಮೂಲ ದಾಖಲಾತಿ ಜೊತೆಗೆ ಸಮಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
2020ರ ಫೆಬ್ರವರಿಯಲ್ಲಿ ಕೆಎಸ್‌ಆರ್‌ಟಿಸಿ ಒಟ್ಟು 3745 ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಚಾಲಕ ಹುದ್ದೆಗಳಿಗೆ 1200, ಚಾಲಕ ಕಂ ನಿರ್ವಾಹಕ 2545 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಪ್ರಸ್ತುತ 2000 ಹುದ್ದೆಗಳಿಗೆ ಮಾತ್ರ ಆಯ್ಕೆ ಪ್ರಕ್ರಿಯೆ ಮುಂದುವರೆಸಿಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಈ ಕೆಳಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.
ಪ್ರಸ್ತುತ ಅಭ್ಯರ್ಥಿಗಳ ಮೂಲ ದಾಖಲಾತಿ/ದೇಹದಾರ್ಢ್ಯತೆ ಪರಿಶೀಲನೆ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆಯನ್ನು ನಡೆಸಲಾಗುವುದು. ಇದಕ್ಕಾಗಿ ಪ್ರತ್ಯೇಕ ದಿನಾಂಕ/ಸ್ಥಳವನ್ನು ಕೂಡಾ ಹೇಳಲಾಗುವುದು. ಈ ಹುದ್ದೆಗೆ ಆಯ್ಕೆಯು ಅಭ್ಯರ್ಥಿಗಳು ತಾವು ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್, ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತದೆ. ಆಯ್ಕೆಯ ಪ್ರಕ್ರಿಯೆಯಲ್ಲಿ ಯಾರ ಹಸ್ತಕ್ಷೇಪ ನಡೆಯುವುದಿಲ್ಲ, ಹಾಗಾಗಿ ಅಭ್ಯರ್ಥಿಗಳು ಶಿಫಾರಸ್ಸು, ಮಧ್ಯವರ್ತಿಗಳ ಮೋಸಕ್ಕೆ ಒಳಗಾಗಬಾರದೆಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಮೇಲೆ ತಿಳಿಸಿದ ಹುದ್ದೆಗಳಿಗೆ ಅಭ್ಯರ್ಥಿಗಳು ತೇರ್ಗಡೆ ಹೊಂದಿರಬೇಕು. ಎಸ್‌ಎಸ್‌ಸಿ 500 ಅಂಕಗಳ ಅಂಕಪಟ್ಟಿಯನ್ನು (ಮುಕ್ತ ವಿವಿಯಿಂದ ಪಡೆದಿರುವುದು) ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. HTV ಚಾಲನಾ ಪರವಾನಿಗೆ ಹೊಂದಿ ಕನಿಷ್ಠ ಎರಡು ವರ್ಷದ್ದಾಗಿರಬೇಕು. ಭಾರೀ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್ ಹೊಂದಿರುವುದು ಅಗತ್ಯ.
ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಇರಬೇಕಾದ ಅರ್ಹತೆಗಳು:
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. HTV ಚಾಲನಾ ಪರವಾನಿಗೆ ಹೊಂದಿ ಕನಿಷ್ಠ ಎರಡು ವರ್ಷಗಳಾಗಿರಬೇಕು. ಚಾಲ್ತಿಯಲ್ಲಿರುವ ನಿರ್ವಾಹಕ ಪರವಾನಗಿ ಮತ್ತು ಕರ್ನಾಟಕ ಬ್ಯಾಡ್ಜ್ ಹೊಂದಿರುವುದು ಅವಶ್ಯಕ.
ವೇತನ;
ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿ ನೀಡಲಾಗುವುದು. ಈ ಸಮಯದಲ್ಲಿ ಚಾಲಕ ಹುದ್ದೆಗೆ ಮಾಸಿಕ ರೂ.10000, ಚಾಲಕ ಕಂ ನಿರ್ವಾಹಕ ಹುದ್ದೆಗೆ ರೂ.9100 ರೂ ನೀಡಲಾಗುವುದು.
ಎರಡು ವರ್ಷಗಳ ನಂತರ ನಿರ್ದಿಷ್ಟ ಘಟಕಗಳಿಗೆ ಅಭ್ಯರ್ಥಿಗಳನ್ನು ನೇಮಿಸಲಾಗುವುದು. ಹಾಗೂ ಅಭ್ಯರ್ಥಿಗಳ ವೇತನ 12400-170-12740-14240-320-15840-420-16680-530-18270-640-19550 ರಷ್ಟು ಇರುತ್ತದೆ.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೂಲ ದಾಖಲಾತಿಗಳ ಪರಿಶೀಲನೆ/ದೈಹಿಕ ಅರ್ಹತೆಯ ಪರಿಶೀಲನೆ/ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಲು ಅಡ್ಮಿಟ್ ಕಾರ್ಡ್ ನೀಡಲಾಗುವುದು. ಇಲ್ಲಿ ದಿನಾಂಕ, ಸ್ಥಳ, ದಾಖಲೆಗಳ ಕುರಿತು ಮಾಹಿತಿ ಬರುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದವರಿಗೆ ಒಟ್ಟು 50 ಅಂಕ, ತಲಾ 25 ಅಂಕಗಳಂತೆ ಎರಡು ಬಾರಿ ಚಾಲನಾ ಸಾಮರ್ಥ್ಯ ವೃತ್ತಿ ಪರೀಕ್ಷೆಯನ್ನು ಗಣಕೀಕೃತ ಟ್ರ್ಯಾಕ್‌ನಲ್ಲಿ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ 25 ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆಗೆ ಅವಕಾಶ ನೀಡಲಾಗುವುದು. ಚಾಲನಾ ವೃತ್ತಿ ಪರೀಕ್ಷೆಯ ಐದು ವಿವಿಧ ಪರೀಕ್ಷೆಗಳ ಪೈಕಿ ಕನಿಷ್ಠ ಅಂಕಗಳನ್ನು ಗಳಿಸಿದವರು ಮಾತ್ರ ಮುಂದಿನ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.