ಕರ್ನಾಟಕ ಯುವ ನಿಧಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಕೆ ಹೇಗೆ, ಇಲ್ಲಿದೆ ವಿವರ

Advertisements

ಕರ್ನಾಟಕ ಸರಕಾರವು ಕಾಂಗ್ರೆಸ್‌ ಚುನಾವಣಾ ಗ್ಯಾರಂಟಿಗಳಲ್ಲಿ ಯುವ ನಿಧಿ ಯೋಜನೆಯನ್ನು ಘೋಷಿಸಿತ್ತು. ಇದೀಗ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಅರ್ಹ ನಿರುದ್ಯೋಗಿ ಯುವಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯುವ ನಿಧಿ ಯೋಜನೆ ಎಂದರೇನು? ಕರ್ನಾಟಕ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯುವ ನಿಧಿ ಯೋಜನಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಇತ್ಯಾದಿ ವಿವರ ತಿಳಿದುಕೊಳ್ಳೋಣ.

ಕರ್ನಾಟಕ ಯುವ ನಿಧಿ ಯೋಜನೆ

ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಹಣಕಾಸಿನ ನೆರವು ನೀಡುವ ಯೋಜನೆ ಇದಾಗಿದೆ. ಯುವ ನಿಧಿ ಯೋಜನೆಯಡಿ , ನಿರುದ್ಯೋಗಿ ಪದವೀಧರರು ಎರಡು ವರ್ಷಗಳವರೆಗೆ ತಿಂಗಳಿಗೆ ರೂ.3,000 ಪಡೆಯುತ್ತಾರೆ. ಡಿಪ್ಲೊಮಾ ಹೊಂದಿರುವವರು ಎರಡು ವರ್ಷಗಳವರೆಗೆ ತಿಂಗಳಿಗೆ 1,500 ರೂಪಾಯಿ ಪಡೆಯುತ್ತಾರೆ. ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಯೋಜನೆಯು ನಿರುದ್ಯೋಗಿ ಯುವಕರಿಗೆ ಹಣಕಾಸಿನ ನೆರವು ನೀಡುತ್ತದೆ, ಅವರ ಮೂಲಭೂತ ಅಗತ್ಯಗಳಾದ ಆಹಾರ, ಬಟ್ಟೆ ಮತ್ತು ವಸತಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಶಿಕ್ಷಣ ಮುಗಿದು ಉದ್ಯೋಗ ಹುಡುಕುವ ಹಂತದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

ಯುವ ನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

ಆಯಾ ಶೈಕ್ಷಣಿಕ ವರ್ಷದಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿರಬೇಕು. ಕರ್ನಾಟಕದ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಪದವಿ ಅಥವಾ ಡಿಪ್ಲೊಮಾ ಪಾಸ್‌ ಆದ ಬಳಿಕ ಆರು ತಿಂಗಳವರೆಗೆ ಕೆಲಸ ಹೊಂದಿರಬಾರದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಅಥವಾ ಪದವಿ ಅಂಕಪಟ್ಟಿ ಹೊಂದಿರಬೇಕು. ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಜೋಡಣೆಯಾಗಿರಬೇಕು. ಈಗಾಗಲೇ ಉದ್ಯೋಗ ಪಡೆದವರು, ಸ್ವಂತ ಉದ್ಯೋಗ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಉನ್ನತ ಶಿಕ್ಷಣ ಪಡೆಯುವವರೂ ಅರ್ಜಿ ಸಲ್ಲಿಸುವಂತೆ ಇಲ್ಲ. ಅಪ್ರೆಂಟಿಸ್‌ ತರಬೇತಿಯಲ್ಲಿರುವವರು ಅರ್ಜಿ ಸಲ್ಲಿಸುವಂತೆ ಇಲ್ಲ.

ಯುವ ನಿಧಿ ಸ್ಕೀಮ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಸರಕಾರದ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು ಇಂತಿವೆ. ಆಧಾರ್‌ ಕಾರ್ಡ್‌ ಇರಬೇಕು. ನಿವಾಸ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆಯ ದಾಖಲೆ ಇರಬೇಕು. ಇದರೊಂದಿಗೆ ಬ್ಯಾಂಕ್‌ ಖಾತೆ ಮಾಹಿತಿ ನೀಡಬೇಕು. ಆಧಾರ್‌ ಸಂಖ್ಯೆಗೆ ಬ್ಯಾಂಕ್‌ ಖಾತೆ ಸಂಖ್ಯೆ ಲಿಂಕ್‌ ಆಗಿರಬೇಕು. ಸೇವಾ ಸಿಂಧು ವೆಬ್‌ ಸೈಟ್‌ ವಿಳಾಸ: sevasindhugs.karnataka.gov.in

Leave a Comment