ಕೊರೊನಾದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡಲು ಮುಂದಾಗಿರುವ ಐಸಿಆರ್‌ಐ ( ಇನ್ಸ್ಟಿಟ್ಯೂಟ್ ಆಫ್ ಕ್ಲಿನಿಕಲ್ ರಿಸರ್ಚ್ ಇಂಡಿಯಾ) ಮುಂದಾಗಿದೆ. ಹೀಗಾಗಿ ಇಂತಹ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ನೀಡಲು ಎನ್‌ಜಿಒ ಗಳು , ಸಂಘಗಳು ಮತ್ತು ಸರಕಾರಿ ಸಂಸ್ಥೆಗಳನ್ನು ಐಸಿಆರ್‌ಐ ಕೇಳಿದೆ.
ಈ ಸಾಂಕ್ರಾಮಿಕ ರೋಗದಿಂದ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಅಂತಹ ಮಕ್ಕಳಿಗೆ ಸಹಾಯ ಮಾಡಲು ಮುಂದಾಗುತ್ತಿದೆ ಮತ್ತು ಅವರ ಭವಿಷ್ಯವನ್ನು ನಾವು ನಾಶವಾಗಲು ಬಿಡುವುದಿಲ್ಲ, ಹೆತ್ತವರ ನಿಧನದಿಂದಾಗಿ ಶಿಕ್ಷಣವನ್ನು ಕಳೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುವುದು ನಮ್ಮಗುರಿ ಎಂದು ಐಸಿಆರ್‌ಐನ ಸಿಒಒ ಕನಿಷ್ಕ್ ದುಗಲ್ ಹೇಳಿದ್ದಾರೆ.
ದೆಹಲಿ, ಮುಂಬೈ, ಪುಣೆ, ಜೈಪುರ, ಡೆಹ್ರಾಡೂನ್, ಭೋಪಾಲ್, ಮಂಗಳೂರು, ಬೆಂಗಳೂರು, ಜೈಪುರ, ಪುದುಚೇರಿ, ತಂಜಾವೂರು ಮತ್ತು ನಾಸಿಕ್ ನಲ್ಲಿರುವ ಯಾವುದೇ ಐಸಿಆರ್‌ಐ ಕ್ಯಾಂಪಸ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯಬಹುದು.
ಈ ಯೋಜನೆಯಲ್ಲಿ ಶಿಕ್ಷಣವನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ತಮ್ಮ ಹೆತ್ತವರ ನಿಧನ ಹೊಂದಿರುವ ದಾಖಲೆಗಳು, ಆಧಾರ್ ಕಾರ್ಡ್, ಹಿಂದಿನ ಶೈಕ್ಷಣಿಕ ಪ್ರಮಾಣ ಪತ್ರಗಳು ಮತ್ತು ಉತ್ತೀರ್ಣರಾದ ಶಾಲೆಯಿಂದ ಪಡೆದ ಪ್ರಮಾಣ ಪತ್ರವನ್ನು ಒದಗಿಸಬೇಕಾಗುತ್ತದೆ ಎಂದು ಸಂಸ್ಥೆ ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.