ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಜುಲೈ 1 ರಿಂದ ಆರಂಭಿಸಿ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಶಿಫಾರಸು ಮಾಡಿದೆ.
2011 ರಲ್ಲಿ ಸಲ್ಲಿಕೆಯಾಗಿರುವ ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ. ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿದ ಸರಕಾರದ ಕಾರ್ತಕ್ರಮಗಳ ಮೇಲ್ವಿಚಾರಣೆ ನಡೆಸಿ ಅಗತ್ಯ ಶಿಫಾರಸುಗಳನ್ನು ನೀಡಲು ಹೈಕೋರ್ಟ್ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡರ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಮಧ್ಯಂತರ ಶಿಫಾರಸು ನೀಡಲಾಗಿದೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ಶಶಿಧರ ಶೆಟ್ಟಿ ಸಮಿತಿಯ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 1,418 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 2,411 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದಾವೆ. ಇಷ್ಟೊಂದು ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದು ಅಪೌಷ್ಟಿಕತೆ ನಿವಾರಣೆ, ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಖಾಲಿ ಇರುವ ಹುದ್ದೆಗೆ ವೇಳಾಪಟ್ಟಿ ಮಾಡಬೇಕು. ಜುಲೈ 1 ರಿಂದ ಅರ್ಜಿ ಆಹ್ವಾನಿಸಬೇಕು. ಅರ್ಜಿ ಆಹ್ಬಾನಕ್ಕೆ ಜು.31 ಕೊನೆ ದಿನಾಂಕವಾಗಿರಬೇಕು. ಆ.15 ಕ್ಕೆ ಅರ್ಜಿಗಳ ಪರಿಶೀಲನೆ ನಡೆಯಬೇಕು. ಡಿಸಿ ನೇತೃತ್ವದ ಆಯ್ಕೆ ಸಮಿತಿ ಆ.31 ಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಸೆ. 15 ಕ್ಕೆ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಅ.10ಕ್ಕೆ ಅಂತಿಮ ಪಟ್ಟಿ ಪ್ರಕಟಿಸಬೇಕು. ಅ.30 ಕ್ಕೆ ನೇಮಕಾತಿ ಆದೇಶ ನೀಡಬೇಕೆಂದು ವರದಿಯಲ್ಲಿ ಸಲಹೆ ನೀಡಲಾಗಿದೆ.